ವಿನಾಯಕ ಕೃಷ್ಣ ಗೋಕಾಕ

ವಿನಾಯಕ ಕೃಷ್ಣ ಗೋಕಾಕ

ಪೀಠಿಕೆ 

ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು 1991ರಲ್ಲಿ ತಂದುಕೊಟ್ಟ ವಿನಾಯಕ ಕೃಷ್ಣ ಗೋಕಾಕರು ( Vinayaka Krishna Gokak) ಕನ್ನಡದ ಪ್ರತಿಭಾವಂತ ಕವಿ ಹಾಗೂ ಪಂಡಿತರಾಗಿದ್ದರು. ವಿನಾಯಕ ಕೃಷ್ಣ ಗೋಕಾಕರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆಗಳು ಅನನ್ಯವಾಗಿವೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ ಮತ್ತು ಅನೇಕ ಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದಾರೆ.

 “ಗೋಕಾಕ್ ವರದಿ”ಯಲ್ಲಿ ಕನ್ನಡಕ್ಕೆ ಶಾಲಾ ಶಿಕ್ಷಣದಲ್ಲಿ ಸಲ್ಲಬೇಕಾದ ನ್ಯಾಯ ದೊರಕಿಸಿಕೊಟ್ಟ ನಾಯಕ. ಕನ್ನಡ ಸಾಹಿತ್ಯದ ದಿಗ್ಗಜ ವಿನಾಯಕ ಕೃಷ್ಣ ಗೋಕಾಕರು ತಮ್ಮ ಅನೇಕ ಸಾಧನೆಗಳ ಮೂಲಕ ಕನ್ನಡಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ  ಸಾಹಿತಿ ಇವರು. 

 

ಜನನ

ಆಗಸ್ಟ್ 9, 1909 ರಂದು ಹಾವೇರಿಯ (Haveri) ಸವಣೂರಿನಲ್ಲಿ  ವಕೀಲರಾದ ಕೃಷ್ಣರಾಯರ ಮಗನಾಗಿ ಜನಿಸಿದ ಇವರು, ತಮ್ಮ ಬಾಲ್ಯವನ್ನು ಒಂದು ಸಣ್ಣ ಸಂಸ್ಥಾನವಾಗಿದ್ದ ಸವಣೂರಿನಲ್ಲಿ ಕಳೆದರು.

 

ಶಿಕ್ಷಣ 

ವಿನಾಯಕರು ತಮ್ಮ ಪ್ರೈಮರಿ ಮತ್ತು ಸೆಕೆಂಡರಿ ಎಜುಕೇಶನ್ ಅನ್ನು ಸವಣೂರು ಮತ್ತು ಧಾರವಾಡದಲ್ಲಿ ಪಡೆದರು. ಧಾರವಾಡದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ  ಕನ್ನಡದ ವರಕವಿ ಬೇಂದ್ರೆಯವರೊಂದಿಗೆ ಪರಿಚಯವಾಯಿತು. ಬೇಂದ್ರೆಯವರು ಗೋಕಾಕರ ಸಾಹಿತ್ಯ ಕೃಷಿಯಲ್ಲಿ ಮಾರ್ಗದರ್ಶಕರಾಗಿ, ಪ್ರೋತ್ಸಾಹಕರಾಗಿ ನಿಂತರು. ಗೋಕಾಕರೇ ಬೇಂದ್ರೆಯವರನ್ನು ತಮ್ಮ ಕಾವ್ಯ ಗುರುವೆಂದು ಪರಿಗಣಿಸುತ್ತಿದ್ದರು.

ಇಂಗ್ಲೀಷ್ ವಿಷಯದ ಎಂ.ಎ ಪರೀಕ್ಷೆಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾದ ಗೋಕಾಕರು, ಕೂಡಲೇ ಪುಣೆಯ ಸಿ.ಎಸ್.ಪಿ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರು. ಕನ್ನಡದ ನೆಲದ ಈ ಯುವಕ ಮರಾಠಿಗರನ್ನು ಕೂಡ ತಮ್ಮ ಕಡೆ ಸೆಳೆಯುವಂತೆ  ಪಾಠವನ್ನು ಮಾಡುತ್ತಿದ್ದರು.

ಫರ್ಗ್ಯೂಸನ್ ಕಾಲೇಜಿನ ಆಡಳಿತ ಮಂಡಳಿಯು ಗೋಕಾಕರ ಪ್ರತಿಭೆಯನ್ನು ಗುರುತಿಸಿ, ಹೆಚ್ಚಿನ ಅಧ್ಯಯನಕ್ಕಾಗಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲು ಅವಕಾಶ ನೀಡಿತು, ನಂತರ ಆಕ್ಸ್‌ಫರ್ಡ್ (Oxford) ವಿಶ್ವ ವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದ ಮೊದಲ ಭಾರತೀಯರಾಗಿದ್ದಾರೆ.

 

ಸಾಹಿತ್ಯ ಜೀವನ 

ಈ ಶತಮಾನದ ಕನ್ನಡ ಲೇಖಕರಲ್ಲಿ ಅಗ್ರಗಣ್ಯರಾಗಿರುವ ವಿ.ಕೃ. ಗೋಕಾಕರ ಬರಹ ತುಂಬ ವಿಪುಲವೂ, ವ್ಯಾಪಕವೂ ಆದದ್ದು. ಕನ್ನಡ,ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಗೋಕಾಕರು ಹಲವಾರು ಕೃತಿಗಳನ್ನು ರಚಿಸಿದ್ದಾರೆ!.  ಗೋಕಾಕ ಅವರ ಮೊದಲ ಕೃತಿ “ಕಲೋಪಾಸಕರು”. 

 

ಇಂಗ್ಲೆಂಡ್ ಪ್ರವಾಸದ ಅನುಭವಗಳನ್ನು ಆಧರಿಸಿ “ಸಮುದ್ರ ಗೀತೆಗಳು” ಮತ್ತು “ಸಮುದ್ರದಾಚೆಯಿಂದ” ಎಂಬ ಕೃತಿಗಳನ್ನು ರಚಿಸಿದರು. “ಸಮುದ್ರ ಗೀತೆಗಳು” ಕವನ ಸಂಕಲನದಲ್ಲಿರುವ “ಕೊಡದಿರು ಶರಧಿಗೆ ಷಟ್ಪದಿಯ ದೀಕ್ಷೆಯನು” ಎಂಬ ಸಾಲು ಬಹಳ ಪ್ರಸಿದ್ಧವಾಗಿದೆ.

ಕಾದಂಬರಿಗಳು – ಸಮರಸವೇ ಜೀವನ, ಇಜ್ಜೋಡು, ಏರಿಳಿತ, ಸಮುದ್ರಯಾನ ಇತ್ಯಾದಿ 

ಕವನ ಸಂಕಲನಗಳು – ಕಲೋಪಾಸಕ, ಪಯಣ, ಸಮುದ್ರಗೀತೆಗಳು, ನವ್ಯ ಕವಿಗಳು, ಸಾಹಿತ್ಯ ವಿಮರ್ಶೆ- ಕವಿಕಾವ್ಯ ಮಹೋನ್ನತಿ, ನವ್ಯ ಮತ್ತು ಕಾವ್ಯ ಜೀವನ.

ಪ್ರವಾಸ ಕಥನ – ಸಮುದ್ರದಾಚೆದಿಂದ, ಪಯಣಿಗ, ಸಂತೋಷ

 

ಪ್ರಶಸ್ತಿಗಳು ಮತ್ತು ಗೌರವಗಳು 

1967ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಮತ್ತು 1979ರಲ್ಲಿ ಕ್ಯಾಲಿಫೋರ್ನಿಯಾದ ಫೆಸಿಫಿಕ್ ವಿಶ್ವವಿದ್ಯಾಲಯಗಳು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿವೆ.

ಕೇಂದ್ರ ಸರ್ಕಾರದಿಂದ  1961ರಲ್ಲಿ ಪದ್ಮಶ್ರೀ ಪ್ರಶಸ್ತಿ, ಹಂಪಿ ವಿಶ್ವವಿದ್ಯಾನಿಲಯದಿಂದ ಗೌರವ ಡಿ.ಲಿಟ್ ಪದವಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪದವಿ ಮತ್ತು ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಪದವಿ ಇವೆರಡೂ ಕನ್ನಡಿಗರೊಬ್ಬರಿಗೆ ಮೊದಲ ಬಾರಿಗೆ ಬಂದಂತಹ ಗೌರವಗಳಾಗಿವೆ.

ಅವರ ಮೇರು ಕೃತಿ “ಭಾರತ ಸಿಂಧು ರಶ್ಮಿ”ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ವಿದ್ಯಾಭವನದ ರಾಜಾಜಿ ಪ್ರಶಸ್ತಿ ಮತ್ತು ಐ.ಬಿ.ಎಚ್. ಪ್ರಶಸ್ತಿಗಳೂ ದೊರಕಿವೆ.  ಗೋಕಾಕರ “ದ್ಯಾವಾ ಪೃಥಿವೀ” ಕವನ ಸಂಕಲನಕ್ಕೆ 1960ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಕೂಡ ದೊರೆತಿದೆ.

 

ಯಾವುದೇ ಕೃತಿಯನ್ನು ಹೆಸರಿಸದೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದು ಇದೇ ಮೊದಲು. ಅದು ಕೂಡ ಗೋಕಾಕರಿಗೆ. ಆದರೆ ಬಹಳ ಜನರು ಅದು  “ಭಾರತ ಸಿಂಧು ರಶ್ಮಿ” ಕೃತಿ ಗಾಗಿಯೇ ಈ ಪ್ರಶಸ್ತಿ ಬಂದಿದೆ ಎಂದು ಭಾವಿಸಿದ್ದಾರೆ. ಸಾಮಾನ್ಯವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ದೆಹಲಿಯಲ್ಲಿ ನೀಡಲಾಗುತ್ತದೆ. ಆದರೆ ಗೋಕಾಕರಿಗೆ ಪ್ರಶಸ್ತಿಯನ್ನು ನೀಡಲು ಸ್ವತಃ ಈ ದೇಶದ ಪ್ರಧಾನಿ ಮಂತ್ರಿಗಳೇ ಮುಂಬಯಿಗೆ ಬಂದಿದ್ದರು. ಈ ನಿದರ್ಶನ ಇವರ ಮಹತ್ವವನ್ನು ತೋರಿಸುತ್ತದೆ. ಅಲ್ಲದೆ ಕನ್ನಡ ಸಾಹಿತ್ಯಕ್ಕೆ ದೊರೆತ ಅಪರೂಪದ ಗೌರವ ಇದಾಗಿದೆ.

 

ಗೋಕಾಕ್ ವರದಿ

ಸಾಹಿತ್ಯ ಲೋಕದ ರತ್ನ ವಿ.ಕೃ. ಗೋಕಾಕರು ಸಾಹಿತ್ಯವಲ್ಲದೆ ಅನೇಕ ಕನ್ನಡ ಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅದರಲ್ಲಿ ಮುಖ್ಯವಾಗಿ ಗೋಕಾಕ್ ವರದಿ. ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಭಾಷೆಯ ಸ್ಥಾನಮಾನವನ್ನು ಉನ್ನತಗೊಳಿಸಲು ಒಂದು ಹೊಸ ಅಧ್ಯಾಯವನ್ನು ಬರೆದರು. 1980ರಲ್ಲಿ ಕರ್ನಾಟಕ ಸರ್ಕಾರವು ಗೋಕಾಕರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ರಚಿಸಿ, ಪ್ರೌಢಶಾಲಾ ವ್ಯಾಸಂಗದಲ್ಲಿ ಭಾಷೆಗಳ ಸ್ಥಾನಮಾನದ ಕುರಿತು ವರದಿ ನೀಡುವಂತೆ ಹೇಳ್ತಾರೆ. ಈ ವರದಿಯಲ್ಲಿ ಕನ್ನಡ ಭಾಷೆಗೆ ಅಗತ್ಯವಾದ ಪ್ರಾಮುಖ್ಯತೆ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು.

 

ಆದರೆ, ಸರ್ಕಾರ ಈ ವರದಿಯನ್ನು ಜಾರಿ ಮಾಡೋದಿಕ್ಕೆ ಸ್ವಲ್ಪ ಸಮಯ ತೆಗೆದುಕೊಂಡಿತು, ಇದರಿಂದ ಕನ್ನಡ ಪ್ರೇಮಿಗಳು ಆಕ್ರೋಶಗೊಂಡು, ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಆರಂಭಿಸಿದರು. ಈ ಚಳವಳಿಯು ಕನ್ನಡ ನಾಡಿನ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮತ್ತು ಪ್ರಭಾವಶಾಲಿ ಚಳವಳಿಯಾಗಿ ಹೊರಹೊಮ್ಮಿತು. ಕೊನೆಗೆ ಗೋಕಾಕ್ ವರದಿಯ ಫಲವಾಗಿ, ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಕನ್ನಡವನ್ನು( kannada) ಕಡ್ಡಾಯ ವಿಷಯವಾಗಿ ಮಾಡಲಾಯಿತು. ಇದು ಕನ್ನಡಿಗರಲ್ಲಿ ಭಾಷಾಭಿಮಾನವನ್ನು ಹೆಚ್ಚಿಸಿತು ಮತ್ತು ಕನ್ನಡ ಭಾಷೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಿತು.

ಗೋಕಾಕರು ಕೇವಲ ವರದಿ ಸಿದ್ಧಪಡಿಸಿದವರಲ್ಲದೆ,  ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡರು. ಇದರಿಂದಾಗಿ ಅವರು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಂಡಿದ್ದಾರೆ. 

 

ಮರಣ 

ತಮ್ಮ ಬದುಕಿನುದ್ದಕ್ಕೂ ಕನ್ನಡದ ಕೀರ್ತಿಪತಾಕೆಗಳನ್ನು ದೇಶದ ಒಳಗೂ ಹೊರಗೂ ಹಾರಿಸಿದ ಗೋಕಾಕರು ಏಪ್ರಿಲ್ 28, 1992 ರಂದು ಬೆಳಗಿನ ಜಾವ ಮುಂಬಯಿಯಲ್ಲಿ (Mumbai) ನಿಧನರಾದರು.

 

 

    Leave A Comment

    Top