ವಿನಾಯಕ ಕೃಷ್ಣ ಗೋಕಾಕರ ನಂತರ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎರಡನೆಯ ಕನ್ನಡಿಗ. ಮ್ಯಾನ್ ಬೂಕರ್ ಪ್ರಶಸ್ತಿಗೆ ನಾಮನಿರ್ದೇಶಗೊಂಡ ಹತ್ತು ಸಾಹಿತಿಗಳಲ್ಲಿ ಒಬ್ಬರಾದ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಯವರು, (U.R. Ananthamurthy) ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಇವರು ಕಾದಂಬರಿಗಳು, ಸಣ್ಣ ಕಥೆಗಳು, ಕವಿತೆಗಳು, ವಿಮರ್ಶೆಗಳು ಮತ್ತು ಪ್ರಬಂಧಗಳನ್ನು ಒಳಗೊಂಡಂತೆ ವಿವಿಧ ಪ್ರಕಾರಗಳಲ್ಲಿ ಬರೆದಿದ್ದಾರೆ.
ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಯು.ಆರ್. ಅನಂತಮೂರ್ತಿಯವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ‘ಮೇಳಿಗೆ’ ಹಳ್ಳಿಯಲ್ಲಿ 1932ರ ಡಿಸೆಂಬರ್ 21ರಂದು ಜನಿಸಿದರು. ಅವರ ತಂದೆ ಉಡುಪಿ ರಾಜಗೋಪಾಲಾಚಾರ್ಯ ಮತ್ತು ತಾಯಿ ಸತ್ಯಮ್ಮ.
ಮೈಸೂರು ಯೂನಿವೆರ್ಸಿಟಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು, ಹೆಚ್ಚಿನ ಅಧ್ಯಯನಕ್ಕಾಗಿ ಇಂಗ್ಲೆಂಡಿಗೆ ಹೋದರು. ಕಾಮನ್‌ವೆಲ್ತ್ ವಿದ್ಯಾರ್ಥಿವೇತನದ ಸಹಾಯದಿಂದ ಬರ್ಮಿಂಗ್‌ಹ್ಯಾಮ್ ಯೂನಿವೆರ್ಸಿಟಿಯಲ್ಲಿ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯದಲ್ಲಿ 1966ರಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು.
ತಮ್ಮ ಜ್ಞಾನವನ್ನು ಹಂಚಿಕೊಳ್ಳುವ ಉದ್ದೇಶದಿಂದ “ಋಜುವಾತು” ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅನಂತಮೂರ್ತಿಯವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಭಾರತೀಯ ಬರಹಗಾರರ ಸಮಿತಿಯ ಸದಸ್ಯರಾಗಿದ್ದ ಅವರು, 1980 ರಲ್ಲಿ ಸೋವಿಯತ್ ಒಕ್ಕೂಟ, ಹಂಗೇರಿ, ಫ್ರಾನ್ಸ್ ಮತ್ತು ಪಶ್ಚಿಮ ಜರ್ಮನಿ ಸೇರಿದಂತೆ ಹಲವಾರು ವಿದೇಶಿ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಸಾಹಿತ್ಯಿಕ ವಲಯದೊಂದಿಗೆ ಸಂವಾದ ನಡೆಸಿದ್ದರು.
ಕಥಾ ಸಂಕಲನಗಳು – ಎಂದೆಂದೂ ಮುಗಿಯದ ಕತೆ , ಪ್ರಶ್ನೆ, ಮೌನಿ , ಆಕಾಶ ಮತ್ತು ಬೆಕ್ಕು
ಕಾದಂಬರಿಗಳು – ಸಂಸ್ಕಾರ, ಭಾರತೀಪುರ, ಅವಸ್ಥೆ
ವಿಮರ್ಶೆ ಮತ್ತು ಪ್ರಬಂಧ ಸಂಕಲನ – ಪ್ರಜ್ಞೆ ಮತ್ತು ಪರಿಸರ, ಪೂರ್ವಾಪರ, ಸಮಕ್ಷಮ, ಸನ್ನಿವೇಶ
ನಾಟಕ – ಆವಾಹನೆ
ಕವನ ಸಂಕಲನ – ಹದಿನೈದು ಪದ್ಯಗಳು, ಮಿಥುನ, ಅಜ್ಜನ ಹೆಗಲ ಸುಕ್ಕುಗಳು
ಆತ್ಮಕತೆ – ಸುರಗಿ , ಮೊಳಕೆ
ಚಲನಚಿತ್ರವಾದ ಕೃತಿಗಳು – ಘಟಶ್ರಾದ್ಧ, ಸಂಸ್ಕಾರ, ಬರ, ಅವಸ್ಥೆ
ಕೃಷ್ಣರಾವ್ ಚಿನ್ನದ ಪದಕ, ಸಂಸ್ಕಾರ, ಘಟಶ್ರಾದ್ಧ ಮತ್ತು ಬರ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ – ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ , ಜ್ಞಾನಪೀಠ ಪ್ರಶಸ್ತಿ , ಕೇರಳ ಸರ್ಕಾರ ದಿಂದ, ಬಷೀರ್ ಪುರಸ್ಕಾರ, ರವೀಂದ್ರ ಟ್ಯಾಗೋರ್ ಸ್ಮಾರಕ ಪದಕ, ಗಣಕ ಸೃಷ್ಟಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಹಿಮಾಚಲ ಪ್ರದೇಶ ಸರ್ಕಾರದಿಂದ ಶಿಖರ್ ಸಮ್ಮಾನ್ ಪ್ರಶಸ್ತಿ ದೊರೆತಿದೆ.
1965ರಲ್ಲಿ ಮೊದಲ ಕಾದಂಬರಿ ಸಂಸ್ಕಾರ ಪ್ರಕಟವಾಯಿತು. ಇದು ವ್ಯಾಪಕ ಚರ್ಚೆಗೆ ಒಳಗಾದ ಕಾದಂಬರಿ. ಈ ಕಾದಂಬರಿ ಭಾರತದ ಹಲವು ಭಾಷೆಗಳಲ್ಲದೆ, ಇಂಗ್ಲಿಷ್, ರಷ್ಯನ್, ಫ್ರೆಂಚ್, ಜರ್ಮನ್, ಹಂಗೇರಿಯನ ಮತ್ತಿತರ ಭಾಷೆಗಳಿಗೆ ಅನುವಾದವಾಗಿದೆ.
ಯು.ಆರ್.ಅನಂತಮೂರ್ತಿಯವರ ಮೊದಲ ಕಾದಂಬರಿ ಸಂಸ್ಕಾರ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದಕ್ಕೂ ಮೊದಲೇ 1958 ರಲ್ಲಿ ಬರೆದ ಪ್ರೀತಿ-ಮೃತ್ಯು-ಭಯ ಪ್ರಕಟವಾಗಿರಲಿಲ್ಲ.
ಯು.ಆರ್. ಅನಂತಮೂರ್ತಿಯವರ ಕೃತಿಗಳನ್ನು ಆಧರಿಸಿ ಹಲವು ಚಲನಚಿತ್ರಗಳು ನಿರ್ಮಾಣವಾಗಿವೆ. ಇವುಗಳಲ್ಲಿ ಸಂಸ್ಕಾರ ಮತ್ತು ಘಟಶ್ರಾದ್ಧ ಚಿತ್ರಗಳು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿವೆ. ಘಟಶ್ರಾದ್ಧದ ಆಧಾರದ ಮೇಲೆ ದೀಕ್ಷಾ ಎಂಬ ಹಿಂದಿ ಚಿತ್ರವೂ ನಿರ್ಮಾಣವಾಗಿದೆ.
ದಶಕಗಳ ಕಾಲ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ ಡಾ. ಅನಂತಮೂರ್ತಿಯವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಅಂತಿಮವಾಗಿ 2014ರಲ್ಲಿ ನಮ್ಮನ್ನು ಅಗಲಿದರು.