ಸಣ್ಣಕಥೆಗಳ ಜನಕ ಎಂದೇ ಹೆಸರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ (Masti Venkatesh Iyengar) ಅವರು ಕನ್ನಡಕ್ಕೆ 4 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಮಹಾಕವಿ. ಮಾಸ್ತಿಯವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕಾದಂಬರಿಗಳು, ಸಣ್ಣ ಕಥೆಗಳು, ಕವನಗಳು ಮತ್ತು ಪ್ರಬಂಧಗಳನ್ನು ರಚಿಸಿದ್ದಾರೆ.
ಮೊದಲು ಕಾವ್ಯಗಳನ್ನ ಇಂಗ್ಲಿಷ್ ನಲ್ಲಿ ಬರೆಯಬೇಕೆನ್ನುವುದು ಅವರ ಬಯಕೆ ಆಗಿತ್ತು ಆದ್ರೆ ಆ ಒಂದು ಘಟನೆ ಅವರನ್ನು ಕನ್ನಡದಲ್ಲಿ ಬರೆಯುವಂತೆ ಪ್ರೇರೇಪಿಸಿದ್ದು ಬಹಳ ಆಶ್ಚರ್ಯ ..
ಮಾಸ್ತಿ ವೆಂಕಟೇಶ ಅಯ್ಯಂಗಾರರು ಕೋಲಾರ (kolar) ಜಿಲ್ಲೆಯ ಮಾಲೂರು ತಾಲೂಕಿನ ಹುಂಗೇನಹಳ್ಳಿಯಲ್ಲಿ ಜೂನ್ 6, 1891 ರಂದು ಜನಿಸಿದರು.
ಮಾಸ್ತಿಯವರ ಪೂರ್ವಿಕರು ಬಹಳ ಶ್ರೀಮಂತರಾಗಿದ್ದರೂ, ಅವರ ವಿದ್ಯಾಭ್ಯಾಸದ ದಿನಗಳು ಕಷ್ಟಕರವಾಗಿದ್ದವು. ತಮ್ಮ ಸಂಬಂಧಿಕರ ಆರ್ಥಿಕ ನೆರವಿನೊಂದಿಗೆ ಎಂಎ ಪದವಿ ಪಡೆದ ಮಾಸ್ತಿಯವರು, ತಮ್ಮ ಅಧ್ಯಯನದ ಎಲ್ಲಾ ಹಂತಗಳಲ್ಲಿ ಅಗ್ರಗಣ್ಯರಾಗಿದ್ದರು. ಮದ್ರಾಸಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಚಿನ್ನದ ಪದಕ (Gold medal) ಗಳಿಸಿದ ಅವರು, ಬೆಂಗಳೂರಿನಲ್ಲಿ ಸಿವಿಲ್ ಸರ್ವಿಸ್ (Civil Service Exam) ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಸರ್ಕಾರಿ ಸೇವೆಗೆ ಸೇರಿಕೊಂಡರು.
ಮಾಸ್ತಿ ವೆಂಕಟೇಶ ಅಯ್ಯಂಗಾರರು ಕನ್ನಡ ಸಾಹಿತ್ಯ (Literature) ಲೋಕದಲ್ಲಿ ಅನನ್ಯ ಸ್ಥಾನವನ್ನು ಹೊಂದಿದ್ದಾರೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ಸೃಜನಶೀಲತೆಯನ್ನು ಕಳೆದುಕೊಳ್ಳದೆ, ಸಾಹಿತ್ಯ ಸೇವೆ ಮಾಡಿದ ಅವರು ಅನೇಕರಿಗೆ ಸ್ಪೂರ್ತಿದಾಯಕರು.
ರಂಗನ ಮದುವೆ ಯಿಂದ ಹಿಡಿದು ಅವರ ಕೊನೆಯ ಕೃತಿಯಾದ ಮಾತುಗಾರ ರಾಮಣ್ಣ ನ ವರೆಗೂ ಒಟ್ಟು 123 ಕೃತಿಗಳನ್ನ ರಚಿಸಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಾಸ್ತಿ ಬರೆದ ಕಾದಂಬರಿಗಳು ಎರಡು, ಜ್ಞಾನಪೀಠ ಪ್ರಶಸ್ತಿ ಪಡೆದ ಕೃತಿ ಚಿಕವೀರ ರಾಜೇಂದ್ರ ಇದು ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತಾಗಿದೆ, ಇನ್ನೊಂದು “ಚನ್ನಬಸವನಾಯಕ”. ಅದೇರೀತಿ ಶ್ರೀರಾಮ ಪಟ್ಟಾಭಿಷೇಕ ಎಂಬ ಮಹಾಕಾವ್ಯ, ಸಣ್ಣ ಕಥೆ ಸಂಗ್ರಹ – ರಂಗನ ಮದುವೆ, ಮಾತುಗಾರ ರಾಮ, ಕಾವ್ಯ ಸಂಕಲನಗಳಾದ – ಬಿನ್ನಹ, ಅರುಣ, ತಾವರೆ ಜೀವನ ಚರಿತ್ರೆ – ರವೀಂದ್ರನಾಥ ಠಾಕೂರ್, ಶ್ರೀ ರಾಮಕೃಷ್ಣ ಸೇರಿದಂತೆ ಹಲವು ಪ್ರಬಂಧ, ನಾಟಕಗಳು, ಕಾದಂಬರಿಗಳನ್ನು ಬರೆದಿದ್ದಾರೆ.
ಮಾಸ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ, ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್, ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ, ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ , ಅಷ್ಟೇ ಅಲ್ಲದೆ ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಸಾಕಷ್ಟು. “ಮಾಸ್ತಿ ಕನ್ನಡದ ಆಸ್ತಿ” ಎಂಬ ಹೇಳಿಕೆ ಒಂದು ನಾಣ್ಣುಡಿಯಾಗಿದೆ. ಎಲ್ಲ ಸಾಹಿತಿಗಳಿಗೂ ಅವರು “ಅಣ್ಣ ಮಾಸ್ತಿ”ಯಾಗಿದ್ದರು. ವರಕವಿ ದ ರಾ ಬೇಂದ್ರೆ ಯವರು ಮಾಸ್ತಿಯವರನ್ನು ಹಿರಿಯಣ್ಣ ಎಂದು ಗೌರವಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಮಾಸ್ತಿ ಸೇವೆ ಸಲ್ಲಿಸಿದರು. 1929ರಲ್ಲಿ ಬೆಳಗಾವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಮೈಸೂರು ಮಹಾರಾಜರು “ರಾಜಸೇವಾ ಪ್ರಸಕ್ತ” ಎಂದು ಗೌರವಿಸಿದ್ದರು. 1972ರಲ್ಲಿ ” ಶ್ರೀನಿವಾಸ ” ಎಂಬ ಅವರ ಅಭಿನಂದನಾ ಗ್ರಂಥ ಪ್ರಕಟವಾಯಿತು. ಅವರ ಕಾವ್ಯನಾಮವು ಕೂಡ ಶ್ರೀನಿವಾಸ ಎಂಬುದಾಗಿದೆ.
ಕೋಲಾರ ಜಿಲ್ಲೆಯ ಮಲ್ಲಸಂದ್ರ ಹತ್ತಿರ ಕಂದಾಯ ಕೇಳಲು ಹೋದಾಗ ಮಾಸ್ತಿಯವರ ಜೀವನದಲ್ಲಿ ಒಂದು ಅವಿಸ್ಮರಣೀಯ ಘಟನೆ ನಡೆಯಿತು. ಮಾಸ್ತಿಯವರು ರೈತನಿಗೆ ಕೇಳ್ತಾರೆ ಯೆನಯ್ಯ ನಿಮಗೆ ಸರಕಾರೀ ನಿಯಮಗಳು ಗೊತ್ತೋ ಗೂತ್ತಿಲ್ವೋ ಅಂತ ಬೈತಾರೆ ಆಗ ಏನು ಅರಿಯದ ಮುಗ್ದ ರೈತನು ರೂಲ್ಸ್ ಎಲ್ಲ ನಿಮ್ಮಂಥವರಿಗೆ ಅರ್ತ ಆಗ್ಲಿ ಅಂತ ಇಂಗ್ಲಿಷ್ನಲ್ಲಿ ಇರುತ್ತವೆ ಅದೇರೀತಿ ಸರ್ಕಾರಿ ನಿಯಮಗಳು ಕನ್ನಡದಲ್ಲಿ ಇದ್ದರೆ ನಾವು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು ಅಂತ ಹೇಳ್ತಾನೆ, ಮಲ್ಲಸಂದ್ರದ ಒಬ್ಬ ಸರಳ ರೈತನ ಮಾತುಗಳು ಅವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಬಿಂಬಿತವಾದವು ಹಾಗೂ ಕನ್ನಡ ಸಾಹಿತ್ಯದತ್ತ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದವು.
ಕನ್ನಡ ಸಾಹಿತ್ಯದ ದಿಗ್ಗಜ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ತಮ್ಮ 95ನೇ ವಯಸ್ಸಿನಲ್ಲಿ ಅಂದ್ರೆ 1986ರಲ್ಲಿ ನಿಧನರಾದರು.
ಅವರ ಅಮೂಲ್ಯ ಕೊಡುಗೆಯನ್ನು ಗೌರವಿಸುವ ಸಲುವಾಗಿ, ಕರ್ನಾಟಕ ಸರ್ಕಾರವು 1993ರಿಂದ ಪ್ರತಿವರ್ಷ ಪ್ರಸಿದ್ಧ ಬರಹಗಾರರಿಗೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿಯನ್ನು ನೀಡುತ್ತಿದೆ. ಅವರ ಜನ್ಮಸ್ಥಳವಾದ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿರುವ ಅವರ ಮನೆಯನ್ನು ಗ್ರಂಥಾಲಯವಾಗಿ ಪರಿವರ್ತಿಸಲಾಗಿದೆ. ಅಲ್ಲದೆ, ಅವರ ನೆನಪಿಗಾಗಿ ಹತ್ತಿರದ ಸ್ಥಳದಲ್ಲಿ ಮಾಸ್ತಿ ವಸತಿ ಶಾಲೆಯನ್ನು ಸ್ಥಾಪಿಸಲಾಗಿದೆ.