ವರಕವಿ, ಶಬ್ದ ಗಾರುಡಿಗನಾದ ಬೇಂದ್ರೆಯವರು (Da.Ra. Bendre) ದೇಶದ್ರೋಹದ ಆರೋಪದ ಮೇಲೆ ಜೈಲಿಗೆ ಹೋಗ್ತಾರೆ, ಆಗಿನ ಸರ್ಕಾರ ಅವರಿಗೆ ಕನ್ನಡ ನಾಡಿನಲ್ಲಿ ಒಂದೂ ಕೆಲಸ ಸಿಗದ ಹಾಗೆ ಮಾಡುತ್ತದೆ, ಇದಕ್ಕೆಲ್ಲ ಕಾರಣ ಅವರು ಬರೆದ ನರಬಲಿ (Narabali) ಎನ್ನುವಂತಹ ಕವನ ಯಾಕಂದ್ರೆ ಈ ಕವನ ಸರ್ಕಾರದ ವಿರುದ್ಧ ಇತ್ತು ಅಂತ…. ಇಂತಹ ಹಲವಾರು ಸಂಕಷ್ಟ ಗಳ ಮದ್ಯೆಯೂ ಸಾಹಿತ್ಯವನ್ನು ಬಿಗಿದಪ್ಪಿಕೊಂಡಿದ್ದ ಅವರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದೆ.
ಭಾರತಕ್ಕೆ 10 ನೇ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಧಾರವಾಡದ (Dharwad) ಅಜ್ಜ 1896ನೆಯ ಇಸವಿ ಜನವರಿ 31 ರಂದು ಜನಿಸಿದರು. ತಂದೆ ರಾಮಚಂದ್ರ ಭಟ್ಟ, ತಾಯಿ ಅಂಬಿಕೆ.
ಕಾವ್ಯನಾಮ ಅಂಬಿಕಾತನಯದತ್ತ ಎಂದು ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ, ಠೋಸರ ಮನೆತನದ ವೈದಿಕ ಕುಟುಂಬದಲ್ಲಿ ಜನಿಸಿದರು.
ಒಂದು ಕಾಲದ ಸಾಂಗ್ಲಿ ಸಂಸ್ಥಾನಕ್ಕೆ ಸೇರಿದ್ದ ಗದಗದ ಸಮೀಪದ ಶಿರಹಟ್ಟಿಯಲ್ಲಿ ಬಾಲ್ಯವನ್ನು ಕಳೆದ ಅವರು, ತಮ್ಮ ತಂದೆಯ ಅಗಲಿಕೆಯ ನೋವಲ್ಲೇ ಉನ್ನತ ಶಿಕ್ಷಣ ಪಡೆದು ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಇವರಿಗೆ ಚಿಕ್ಕ ವಯಸ್ಸಿನಿಂದಲೇ ಕವಿತೆ ಬರೆಯುವ ಹವ್ಯಾಸವಿತ್ತು. ಅವರ ಪ್ರಥಮ ಕಾವ್ಯ ಸಂಕಲನ “ಕೃಷ್ಣ ಕುಮಾರಿ” ಯು ಆಗಲೇ ಅಂದರೆ “ಪ್ರಭಾತ” ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಬೇಂದ್ರೆ ತಮ್ಮ ಜೀವನದಲ್ಲಿ ಹಲವಾರು ಕವನ ಸಂಕಲನಗಳನ್ನು ಬರೆದಿದ್ದಾರೆ. ಇವುಗಳಲ್ಲಿ “ಗರಿ”, “ಕಾಮಕಸ್ತೂರಿ”, “ಸೂರ್ಯಪಾನ”, “ನಾದಲೀಲೆ”, “ನಾಕುತಂತಿ” ಮುಂತಾದವುಗಳು ಪ್ರಮುಖವಾದವು. ಅದರಲ್ಲಿ “ನಾಕುತಂತಿ” ಎಂಬ ಕೃತಿಯನ್ನು ಬರೆದಿದ್ದಕ್ಕಾಗಿ ಬೇಂದ್ರೆಯವರಿಗೆ 1974 ರಲ್ಲಿ ಕೇಂದ್ರ ಸರ್ಕಾರದಿಂದ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.
ಇದರ ಮದ್ಯೆ 1921 ರಲ್ಲಿ ಧಾರವಾಡದಲ್ಲಿ ಅವರು ಗೆಳೆಯರೊಡನೆ ಕಟ್ಟಿದ “ಗೆಳೆಯರ ಗುಂಪು” ಸಂಸ್ಥೆ ಅವರ ಸಾಹಿತ್ಯ ಚಟುವಟಿಕೆಗಳಿಗೆ ಇನ್ನಷ್ಟು ಪುಷ್ಟಿ ನೀಡಿತು.
ಇವರ ಅಪಾರವಾದ ಸಾಹಿತ್ಯ ಜ್ಞಾನಕ್ಕೆ ಮತ್ತು ಪ್ರೇಮಕ್ಕೆ ಪ್ರಶಸ್ತಿಗಳು ಬೆನ್ನಟ್ಟಿ ಬಂದವು ಆದರೂ ಯಾವ ಪ್ರಶಸ್ತಿಯು ಇವರ ಸಾಹಿತ್ಯವನ್ನು ಪ್ರಶಂಸೆ ಮಾಡಲಾರವು. ಅಷ್ಟು ಅದ್ಭುತವಾದ ಸಾಹಿತ್ಯ ಅವರದು. 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ., 1958 ರಲ್ಲಿ ‘ಅರಳು ಮರಳು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ, 1965 ರಲ್ಲಿ ಮರಾಠಿಯಲ್ಲಿ ರಚಿಸಿದ “ಸಂವಾದ” ಎಂಬ ಕೃತಿಗೆ ಕೇಳ್ಕರ್ ಬಹುಮಾನ, 1968 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು 1973 ರಲ್ಲಿ ‘ನಾಕುತಂತಿ’ (Nakutanti) ಕೃತಿಗೆ ಜ್ಞಾನಪೀಠಪ್ರಶಸ್ತಿ ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಫೆಲೋಷಿಪ್ ಪಡೆದರು.
“ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ.” ನೀವು ಪ್ರತಿವರ್ಷ ಯುಗಾದಿ ಸಮಯದಲ್ಲಿ ಈ ಹಾಡು ಕೇಳಿರ್ತೀರಾ, ಬೇಂದ್ರೆ ಯವರು ಬರೆದಂತಹ ಕವಿತೆ – 1963 ರಲ್ಲಿ ಕುಲವಧು ಎಂಬ ಚಲನಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಈ ಹಾಡು ಇಂದಿಗೂ ಬಹಳ ಖ್ಯಾತಿ ಪಡೆದ ಹಾಡಾಗಿದೆ. ಇದೆ ರೀತಿ ಇನ್ನೊಂದು ಹಾಡಿದೆ, ಬೇಂದ್ರೆ ಯವರಿಗೆ ಒಟ್ಟು 9 ಜನ ಮಕ್ಕಳು ಆದರೆ ದುರದೃಷ್ಟ ನೋಡಿ ಉಳಿದವರು 3 ಜನ ಮಾತ್ರ ಈ ಕಠಿಣ ಸಂದರ್ಭದಲ್ಲಿ ಬರೆದ ಹಾಡೇ “ನೀ ಹಿಂಗ ನೋಡಬೇಡ ನನ್ನ, ನೀ ಹಿಂಗ ನೋಡಿದರ ನನ್ನ ತಿರುಗಿ ನಾ ಹೆಂಗ ನೋಡಲಿ ನಿನ್ನ ” ಬೇಂದ್ರೆ ದಂಪತಿ ತಮ್ಮ ಮಗುವನ್ನ ಕಳೆದುಕೊಂಡ ಸಂದರ್ಭದಲ್ಲಿ ಅವರ ಹೆಂಡತಿಯ ನೋಟವನ್ನು ತಾಳಲಾರದೆ ಬರೆದ ಹಾಡಿದು.
ಬೇಂದ್ರೆಯವರು ಕೃತಿಯಲ್ಲಿ ಎಲ್ಲೆಲ್ಲೂ ಗಣಿತ ಎಂಬುದು ಅಡಗಿದೆ ಎಂದು ಹೇಳುತ್ತಾರೆ. ಒಂದು ಬಾಳೆಹಣ್ಣಿನ ಗೊನೆಯಲ್ಲಿ ಎಷ್ಟು ಹಣ್ಣುಗಳಿವೆ, ಹಲಸಿನ ಹಣ್ಣಿನಲ್ಲಿ ಎಷ್ಟು ಮುಳ್ಳುಗಳು ಇವೆ, ಒಂದು ಸಣ್ಣ ಹೂವಿನಲ್ಲಿ ಎಷ್ಟು ದಳಗಳು ಇವೆ ಎಂದು ಎಣಿಸುವವರೆಗೆ ಎಲ್ಲದರಲ್ಲೂ ಒಂದು ನಿರ್ದಿಷ್ಟ ಸಂಖ್ಯೆ ಇರುತ್ತದೆ – ಎನ್ನುತ್ತಲೇ ಮನಸ್ಸಿಗೆ 441 ಮತ್ತು ಹೃದಯಕ್ಕೆ 881 ಎಂಬ ಸಂಖ್ಯೆಗಳನ್ನು ನೀಡಿದ್ದಾರೆ.
ಬೇಂದ್ರೆಯವರು ಸಾವಿನ ಬಗ್ಗೆ ಒಂದು ಮಾತು ಹೇಳುತ್ತಾರೆ, ಸಾವು ನಾವು ಇರೋವರೆಗೂ ನಮ್ಮ ಹತ್ರ ಅದು ಬರಲ್ಲ ಆದರೆ ಅದು ಬಂದಾಗ ನಾವೇ ಇರಲ್ಲ. ಈ ಸಾಲು ಎಷ್ಟು ಅರ್ಥ ಒಳಗೊಂಡಿದೆ ಅಲ್ಲವೇ? 26 ಅಕ್ಟೋಬರ್ 1981 ರಂದು ಬೇಂದ್ರೆ ಯವರು ತಮ್ಮ 85 ನೇ ವಯಸ್ಸಿನಲ್ಲಿ ಮುಂಬೈನ ಹರ್ಕಿಶಂದಾಸ್ ಆಸ್ಪತ್ರೆಯಲ್ಲಿ ಬಾರದ ಲೋಕಕ್ಕೆ ತೆರಳಿದರು.
ಬೇಂದ್ರೆ ಅಜ್ಜನ ಕವಿತೆಗಳು ಅವರ ಜೀವನದ ಅನುಭವಗಳೊಂದಿಗೆ ಬೆರೆತು ಹುಟ್ಟಿರುವಂತಹವು, ಅವರು ಕನ್ನಡದ ಜೊತೆಗೆ ಮರಾಠಿಯಲ್ಲಿಯೂ ಕವಿತೆ ಬರೆದರು. ಆಧ್ಯಾತ್ಮದ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಅವರ ಹಲವಾರು ಕವಿತೆಗಳು ಭಾವಗೀತೆಯ ಮೂಲಕ ಜನಮನ್ನಣೆ ಗಳಿಸಿವೆ, ಇವರ ಸಾಹಿತ್ಯ ಕೇಳದವರೇ ಇಲ್ಲ ಕೇಳಿ ತಲೆತೂಗದವರೇ ಇಲ್ಲ……