ಗಿರೀಶ್ ಕಾರ್ನಾಡ್

 

ಗಿರೀಶ್ ಕಾರ್ನಾಡ್

ಗಿರೀಶ್ ಕಾರ್ನಾಡ್ (Girish Karnad) ಒಬ್ಬ ಪ್ರಖ್ಯಾತ ಭಾರತೀಯ ನಟ, ಚಲನಚಿತ್ರ ನಿರ್ದೇಶಕ, ಕನ್ನಡ ಬರಹಗಾರ ಮತ್ತು ನಾಟಕಕಾರ.  1960 ರ ದಶಕದಲ್ಲಿ ನಾಟಕಕಾರರಾಗಿ ಅವರ ಹೊರಹೊಮ್ಮುವಿಕೆಯನ್ನು ಕನ್ನಡದಲ್ಲಿ ಆಧುನಿಕ ಭಾರತೀಯ  ಬರವಣಿಗೆಯ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವೆಂದು ಪರಿಗಣಿಸಲಾಗಿದೆ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಇತರ ಕೃತಿಗಳನ್ನು ರಚಿಸಿದ್ದಾರೆ.

 

ಜನನ 

ಗಿರೀಶ ಕಾರ್ನಾಡ್‌ರು1938 ಮೇ 19ರಂದು ಮಹಾರಾಷ್ಟ್ರದ (Maharashtra) ಮಾಥೇರಾನದಲ್ಲಿ ಜನಿಸಿದರು.  ತಂದೆ ಡಾ॥ ರಘುನಾಥ್ ಕಾರ್ನಾಡ್, ತಾಯಿ ಕೃಷ್ಣಾ ಬಾಯಿ.   ಡಾ॥ ರಘುನಾಥ ಕಾರ್ನಾಡರು ಮದುವೆಯಾದ ಹೊಸತರಲ್ಲೇ ಪತ್ನಿಯನ್ನು ಕಳೆದುಕೊಂಡರು,  ಆದರೆ  ಅವರು ಬಾಲ್ಯದಲ್ಲೇ ವಿಧವೆಯಾದ ಐದು ವರ್ಷದ ಮಗುವಿನ ತಾಯಿ ಕೃಷ್ಣಾಬಾಯಿಯವರನ್ನು ಸಮಾಜದ ವಿರೋಧದ ನಡುವೆಯೂ ಮದುವೆಯಾದದ್ದು ಅವರ ದಿಟ್ಟತನ ಮತ್ತು ಪ್ರಗತಿಪರ ಚಿಂತನೆಗೆ ಹಿಡಿದ ಕನ್ನಡಿ.   ಸಮಾಜದ ಕಟ್ಟಳೆ ಹೆಚ್ಚಾಗಿ ಮಾನವೀಯತೆ ಮತ್ತು ಆದರ್ಶಕ್ಕೆ ಬೆಲೆ ಕೊಟ್ಟರು.

 

ಶಿಕ್ಷಣ  

ಗಿರೀಶ ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮುಗಿಯಿತು, ಪ್ರೌಢಶಿಕ್ಷಣ  ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು.  ನಂತರ ಅವರು ಪ್ರತಿಷ್ಠಿತ ರ್ಹೋಡ್ಸ್ ಸ್ಕಾಲರ್ಶಿಪ್ ಪಡೆದು ಹೆಚ್ಚಿನ ವ್ಯಾಸಂಗಕ್ಕಾಗಿ ಆಕ್ಸ್‌ಫರ್ಡ್‌ ಗೆ  ಹೋದರು. ಇದು ನಿಜಕ್ಕೂ ಹೆಮ್ಮೆಯ ವಿಷಯ, ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್ (Oxford) ಡಿಬೇಟ ಕ್ಲಬ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಏಷ್ಯಾದ ಮೊದಲಿಗರು ,  ಅವರ ಓದು ಮತ್ತು ಚರ್ಚೆಯ ಆಸಕ್ತಿ ಕೇವಲ ಭಾರತಕ್ಕೆ ಸೀಮಿತವಾಗಿರಲಿಲ್ಲ. ಅವರು ದೇಶ ವಿದೇಶಗಳಲ್ಲಿ ಸಂಚರಿಸಿ ವಿದ್ವಾಂಸರು ಮತ್ತು ಕಲಾಸೇವಕರ ಒಡನಾಟದಲ್ಲಿ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡರು. 

 

ವೃತ್ತಿ ಜೀವನ  

ಗಿರೀಶ್ ಕಾರ್ನಾಡ ಅವರು ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದರು. ಅವರ ವೃತ್ತಿ ಜೀವನವು ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಆಕ್ಸ್‌ಫರ್ಡ್‌ನಿಂದ ಬಂದ ನಂತರ ಮದ್ರಾಸ್‌ನಲ್ಲಿ ಆಕ್ಸ್ ಫ಼ರ್ಡ್ ಯೂನಿವರ್ಸಿಟಿ ಪ್ರೆಸ್ ನಲ್ಲಿ ಸಂಪಾದಕರಾಗಿ ನೌಕರಿಯಲ್ಲಿದ್ದು, ಅದನ್ನು ತೊರೆದು ಧಾರವಾಡಕ್ಕೆ ವಾಪಾಸಾಗಿ ನಾಟಕ ಕ್ಷೇತ್ರದಲ್ಲಿ ಕೃಷಿ ನಡೆಸಿದರು.

 

ನಾಟಕ ರಚನೆ

ಇಂಗ್ಲೆಂಡಿಗೆ ತೆರಳುವ ಮೊದಲೆ ಗಿರೀಶ ಕಾರ್ನಾಡರ ಮೊದಲ ಸಾಹಿತ್ಯ ಕೃತಿ ಯಯಾತಿ ನಾಟಕ ಧಾರವಾಡದ ಮನೋಹರ ಗ್ರಂಥಮಾಲೆಯಲ್ಲಿ ಪ್ರಕಟವಾಯಿತು.  ಇಂಗ್ಲೆಂಡಿನಿಂದ ಮರಳಿದ ಬಳಿಕ ತುಘಲಕ್ ಹಾಗೂ ಹಯವದನ ಪ್ರಕಟವಾದವು.   ಈ ನಡುವೆ ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್‍ನ ನಿರ್ದೇಶಕರಾಗಿದ್ದು, ಅದನ್ನು ಬಿಟ್ಟು ಮುಂಬಯಿಗೆ ಬಂದ ಕಾರ್ನಾಡರು ಕೆಲವು ಚಲನಚಿತ್ರಗಳಲ್ಲಿ ನಟಿಸಿದರು. ಆ ರಂಗವನ್ನೂ ತ್ಯಜಿಸಿ ಮತ್ತೆ ಬೆಂಗಳೂರಿಗೆ ಬಂದರು.  ಅಲ್ಲಿಂದ ರಚಿತವಾದ ಅವರ ನಾಟಕಗಳು-ಅಂಜು ಮಲ್ಲಿಗೆ, ನಾಗಮಂಡಲ, ತಲೆದಂಡ ಹಾಗೂ ಅಗ್ನಿ ಮತ್ತು ಮಳೆ.

 

ಸಾಹಿತಿ ಮತ್ತು ವಿದ್ವಾಂಸ (Writer and Scholar)

ಗಿರೀಶ್ ಕಾರ್ನಾಡರು ಕೇವಲ ನಾಟಕಕಾರರಾಗಿರದೆ,  ಒಬ್ಬ ಪ್ರಮುಖ ಸಾಹಿತಿ ಮತ್ತು ವಿದ್ವಾಂಸರಾಗಿದ್ದರು. ಅವರು ತಮ್ಮ ನಾಟಕಗಳನ್ನು ಇಂಗ್ಲಿಷ್‌ಗೆ ಸ್ವತಃ ಅನುವಾದಿಸಿದ್ದಾರೆ  ಮತ್ತು ಅವರ ಕೃತಿಗಳು ಅನೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ.  ಗಿರೀಶ್ ಕಾರ್ನಾಡರು ಅನೇಕ ಪ್ರತಿಷ್ಠಿತ ಸಂಸ್ಥೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ.  ಅವರು 1974-75ರಲ್ಲಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ದೇಶಕರಾಗಿದ್ದರು,  ಮತ್ತು 1988-93 ರವರೆಗೆ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.   2000-2003 ರವರೆಗೆ ಲಂಡನ್‌ನ ನೆಹರು ಕೇಂದ್ರದ ನಿರ್ದೇಶಕರಾಗಿಯೂ  ಕಾರ್ಯನಿರ್ವಹಿಸಿದ್ದಾರೆ.

 

ಪ್ರಶಸ್ತಿಗಳು ಮತ್ತು ಪುರಸ್ಕಾರಗಳು (Awards and Honors)

ಗಿರೀಶ್ ಕಾರ್ನಾಡರು ತಮ್ಮ ಕೊಡುಗೆಗಳಿಗಾಗಿ ಅನೇಕ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ.  1998 ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.  ಭಾರತ ಸರ್ಕಾರವು ಅವರಿಗೆ ಪದ್ಮಶ್ರೀ (1974) ಮತ್ತು ಪದ್ಮಭೂಷಣ (1992) ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.  ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ. 

 

ನಿಧನ

ಗಿರೀಶ್ ಕಾರ್ನಾಡ್ ಅವರು ದಿನಾಂಕ 10-6-2019  ರಂದು ಬೆಂಗಳೂರಿನಲ್ಲಿ ಮರಣ ಹೊಂದಿದರು.

 

ಉಪಸಂಹಾರ 

ಒಟ್ಟಾರೆಯಾಗಿ, ಗಿರೀಶ್ ಕಾರ್ನಾಡರ ವೃತ್ತಿ ಜೀವನವು ಭಾರತೀಯ ಸಾಹಿತ್ಯ, ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳಿಗೆ  ಅವರ ಮಹತ್ತರವಾದ ಕೊಡುಗೆಗಳನ್ನು ಒಳಗೊಂಡಿದೆ.  ಅವರು ತಮ್ಮ ಕೃತಿಗಳ ಮೂಲಕ ಸಮಕಾಲೀನ ಸಮಸ್ಯೆಗಳನ್ನು ವಿಶ್ಲೇಷಿಸುತ್ತಾ, ಪ್ರೇಕ್ಷಕರನ್ನು ಚಿಂತನೆಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

    Leave A Comment

    Top