ಕೋಟಾ ಶಿವರಾಮ ಕಾರಂತ

ಕೋಟಾ ಶಿವರಾಮ ಕಾರಂತ

ಪೀಠಿಕೆ 

ಶೋಷಣೆಗೆ ಒಳಗಾದ ಒಂದು ಸಮೂಹದ ಧ್ವನಿಯಾದ ಚೋಮನ ದುಡಿ ಕೃತಿಯ ಕರ್ತೃ ನಡೆದಾಡುವ ವಿಶ್ವಕೋಶ, ಕಡಲತೀರ ಭಾರ್ಗವ ಕೋಟ ಶಿವರಾಮ ಕಾರಂತರು ಕನ್ನಡ ಸಾಹಿತ್ಯದ ಮಹತ್ವದ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ಸಾಹಿತಿಗಳಾಗಿರಲಿಲ್ಲ, ಒಬ್ಬ ಚಿಂತಕರು, ಪರಿಸರವಾದಿ ಮತ್ತು ಸಮಾಜ ಸುಧಾರಕರಾಗಿಯೂ ಗುರುತಿಸಿಕೊಂಡಿದ್ದರು. ಅವರ ಕೃತಿಗಳು ಸಮಾಜದ ವಿವಿಧ ಮುಖಗಳನ್ನು ತೋರಿಸುತ್ತವೆ. ಅಲ್ಲದೆ ಓದುಗರನ್ನು ತನ್ನತ್ತ ಸೆಳೆಯುವ ಅದ್ಭುತ ಸಾಹಿತ್ಯ ಅವರದು….

 

ಜನನ 

ಶಿವರಾಮ ಕಾರಂತರು (Shivaram karanth) 1902ರ ಅಕ್ಟೋಬರ್ 10ರಂದು ಉಡುಪಿ (Udupi) ಜಿಲ್ಲೆಯ ಕೋಟದಲ್ಲಿ ಜನಿಸಿದರು. ಅವರು ಸ್ಮಾರ್ತ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಕೋಟದ ಶೇಷ ಕಾರಂತ ಮತ್ತು ಲಕ್ಷ್ಮಮ್ಮ ದಂಪತಿಗಳ ಐದನೇ ಮಗನಾಗಿ ಶಿವರಾಮ ಕಾರಂತರು ಜನಿಸಿದರು. 

 

ಸಾಹಿತ್ಯ ಜೀವನ 

ಗಾಂಧೀಜಿಯ ತತ್ವಗಳಿಂದ ಪ್ರಭಾವಿತರಾದ ಕಾರಂತರು, ಕಾಲೇಜಿನಲ್ಲಿದ್ದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡ ಕಾರಣ ಅವರು ಪದವಿ ಪೂರೈಸಲು ಸಾಧ್ಯವಾಗಲಿಲ್ಲ. ಬಳಿಕ, ಕರ್ನಾಟಕದಲ್ಲಿ ಖಾದಿ ಮತ್ತು ಸ್ವದೇಶಿ ಪ್ರಚಾರದಲ್ಲಿ ತೊಡಗಿಸಿಕೊಂಡರು. ಸ್ವಾತಂತ್ರ್ಯ ಹೋರಾಟದ ಜೊತೆಜೊತೆಗೆ, ಕಾರಂತರು ತಮ್ಮ ಸಾಮರ್ಥ್ಯವನ್ನು ಬರವಣಿಗೆಯಲ್ಲಿ ವ್ಯಕ್ತಪಡಿಸಲು ಪ್ರಾರಂಭಿಸಿದರು. 

1924 ರಿಂದಲೇ ಸಾಹಿತ್ಯ ಸಾಗರದಲ್ಲಿ ತೇಲಾಡಿದ ಕಾರಂತರು, ರಾಷ್ಟ್ರಗೀತೆ ಸುಧಾಕರ ಕವನ  ಸಂಗ್ರಹದ ಮೂಲಕ ತಮ್ಮ ಸೃಜನಶೀಲ ಪ್ರಯಾಣವನ್ನು ಆರಂಭಿಸಿದರು. ವಿಚಿತ್ರಕೂಟ ಕಾದಂಬರಿಯ ನಂತರ, ನಿರ್ಭಾಗ್ಯ ಜನ್ಮ ಮತ್ತು ಸೂಳೆಯ ಸಂಸಾರದಂತಹ ಕೃತಿಗಳ ಮೂಲಕ ಬಡವರ ಬದುಕಿನ ಕಹಿ ಸತ್ಯವನ್ನು  ತೋರಿಸಿದರು. ಕಾರಂತರು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಶ್ರೀಮಂತಗೊಳಿಸಿದ ಅನನ್ಯ ಪ್ರತಿಭೆ, ಅವರ ಕಾದಂಬರಿಗಳಾದ ಮರಳಿ ಮಣ್ಣಿಗೆ , ಬೆಟ್ಟದ ಜೀವ , ಅಳಿದ ಮೇಲೆ, ಮೂಕಜ್ಜಿಯ ಕನಸುಗಳು , ಮೈ ಮನಗಳ ಸುಳಿಯಲ್ಲಿ , ಅದೇ ಊರು ಅದೇ ಮರ , ಹೀಗೆ ಆ ಕೃತಿಗಳು ವಿಮರ್ಶಕರ ನಯನಗಳನ್ನು ಮತ್ತು ಓದುಗರ ಮನಸ್ಸನ್ನು ಸೆಳೆದಿವೆ, ಹಾಗೂ ಕೃತಿಗಳ ಬಗ್ಗೆ ಗಂಭೀರವಾದ ವಿಮರ್ಶೆಗಳು ಮತ್ತು ವ್ಯಾಪಕವಾದ ವಿಶ್ಲೇಷಣೆಗಳು ನಡೆದಿವೆ.”

 

ಅವರ ಮೂಕಜ್ಜಿಯ ಕನಸುಗಳು (Mookajjiya kanasugaḷu) ಕಾದಂಬರಿಗೆ ಅತ್ಯುನ್ನತ  ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಅವರು ಕರ್ನಾಟಕದ ಪ್ರಾಚೀನ ರಂಗ ನೃತ್ಯ-ನಾಟಕ ಯಕ್ಷಗಾನ  ಕುರಿತು ಎರಡು ಪುಸ್ತಕಗಳನ್ನು ಬರೆದಿದ್ದಾರೆ. ಅವರು 1930 ಮತ್ತು 1940 ರ ದಶಕಗಳಲ್ಲಿ ಕೆಲವು ವರ್ಷಗಳ ಕಾಲ ಮುದ್ರಣ ತಂತ್ರದ ಪ್ರಯೋಗಗಳಲ್ಲಿ ತೊಡಗಿಸಿಕೊಂಡು ತಮ್ಮ ಕಾದಂಬರಿಗಳನ್ನು ಮುದ್ರಿಸಿದರು, ಆದರೆ ಆರ್ಥಿಕ ನಷ್ಟವನ್ನು ಅನುಭವಿಸಬೇಕಾಯಿತು.  90 ನೇ ವಯಸ್ಸಿನಲ್ಲಿ, ಅವರು ಪಕ್ಷಿಗಳ ಬಗ್ಗೆ ಪುಸ್ತಕವನ್ನು ಬರೆದರು (2002 ರಲ್ಲಿ ಮನೋಹರ ಗ್ರಂಥ ಮಾಲಾ, ಧಾರವಾಡದಿಂದ ಪ್ರಕಟಿಸಲಾಗಿದೆ)  ಅವರು ತಮ್ಮ ನಲವತ್ತೇಳು ಕಾದಂಬರಿಗಳನ್ನು ಹೊರತುಪಡಿಸಿ, ಮೂವತ್ತೊಂದು ನಾಟಕಗಳು, ನಾಲ್ಕು ಸಣ್ಣ ಕಥಾ ಸಂಕಲನಗಳು, ಆರು ಪ್ರಬಂಧಗಳು ಮತ್ತು ರೇಖಾಚಿತ್ರಗಳ ಪುಸ್ತಕಗಳು , ಹದಿಮೂರು ಕಲೆಯ ಪುಸ್ತಕಗಳು, ಎರಡು ಕವಿತೆಗಳ ಸಂಪುಟಗಳು, ಒಂಬತ್ತು ವಿಶ್ವಕೋಶಗಳು ಮತ್ತು ವಿವಿಧ ವಿಷಯಗಳ ಕುರಿತು ನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. 

 

ಪ್ರಶಸ್ತಿಗಳು ಮತ್ತು ಗೌರವಗಳು 

ಶಿವರಾಮ ಕಾರಂತರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ, ಅಂತಹ ಕವಿಗೆ ಪ್ರಶಸ್ತಿಗಳು ಬೆನ್ನಟ್ಟಿ ಬಂದವು. ಇವರಿಗೆ ಜ್ಞಾನಪೀಠ ಪ್ರಶಸ್ತಿ ಸೇರಿದಂತೆ  ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್, ಪದ್ಮಭೂಷಣ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ,ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ , ರಾಜ್ಯೋತ್ಸವ ಪ್ರಶಸ್ತಿ , ಸಂಗೀತ ನಾಟಕ ಪ್ರಶಸ್ತಿ, ಪಂಪ ಪ್ರಶಸ್ತಿ, ಸ್ವೀಡಿಷ್ ಅಕಾಡೆಮಿ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳು ಇವರನ್ನ ಹುಡುಕಿಕೊಂಡು ಬರುತ್ತವೆ. 

ಆದರೆ  ಭಾರತದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಅವರು ತಮ್ಮ ಪದ್ಮಭೂಷಣ ಗೌರವವನ್ನು ಹಿಂದಿರುಗಿಸಿದರು. ಇನ್ನು  1975 ರಲ್ಲಿ ತೆರೆಕಂಡ ಚೋಮನ ದುಡಿ ಚಿತ್ರಕ್ಕೆ , ರಾಷ್ಟ್ರಿಯ ಚಲನಚಿತ್ರ ಪ್ರಶಸ್ತಿಯಲ್ಲಿ , ಅತ್ಯತ್ತಮ ಚಲನಚಿತ್ರ  ಮತ್ತು ಕಾರಂತರಿಗೆ ಅತ್ಯುತ್ತಮ ಕಥೆಗಾರ  ಪ್ರಶಸ್ತಿ ದೊರೆತಿದ್ದು ಸ್ವರ್ಣ ಕಮಲ ನೀಡಿ ಗೌರವಿಸಲಾಗಿದೆ.  2010 – ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ವಿಶೇಷ ತೀರ್ಪುಗಾರರ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ.  

 

ಮರಣ 

ಸಕಲಕಲಾವಲ್ಲಭರಾದ ಕಾರಂತರು 1997 ರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು, ಅಂತಿಮವಾಗಿ ತಮ್ಮ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. 

 

ಉಪಸಂಹಾರ 

ಪುತ್ತೂರಿನಲ್ಲಿ ನೆಲೆಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಕೆ.ಶಿವರಾಮ ಕಾರಂತರ ಹೆಸರಿನಲ್ಲಿ “ಶಿವರಾಮ ಕಾರಂತ ಬಾಲವನ” “Shivarama Karanth Balavana”  ಎಂದು ಪ್ರಸಿದ್ಧಿಯಾಗಿದೆ. ಕಾರಂತರ ಸ್ಮರಣಾರ್ಥವಾಗಿ ಅವರ ನಿವಾಸವನ್ನು ವಸ್ತುಸಂಗ್ರಹಾಲಯ, ಉದ್ಯಾನ ಮತ್ತು ಮನರಂಜನಾ ಕೇಂದ್ರಗಳಾಗಿ ಪರಿವರ್ತಿಸಲಾಗಿದೆ. ಶಿವರಾಮ ಕಾರಂತರು ತಮ್ಮ ಕೃತಿಗಳ ಮೂಲಕ ಸಮಾಜದ ಆಗುಹೋಗುಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

 

 

    Leave A Comment

    Top