“ಜಯ ಭಾರತ ಜನನಿಯ ತನುಜಾತೆ” ಎಂಬ ನಾಡಗೀತೆಯ ಸೃಷ್ಟಿಕರ್ತ, ಕನ್ನಡ (Kannada) ಸಾಹಿತ್ಯದ ಅಗ್ರಗಣ್ಯ ವ್ಯಕ್ತಿತ್ವ ಕುವೆಂಪು. ಕನ್ನಡದ ಮೇಲಿನ ಅಪಾರ ಪ್ರೀತಿಯಿಂದ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಕುವೆಂಪು, “ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು” ಎಂಬ ಮಾತುಗಳ ಮೂಲಕ ಕನ್ನಡಾಭಿಮಾನವನ್ನು ಜಾಗೃತಗೊಳಿಸಿದರು. ಅವರ ಅತ್ಯಂತ ಪ್ರಸಿದ್ಧ ಕೃತಿ ‘ಶ್ರೀರಾಮಾಯಣ ದರ್ಶನಂ’ ಭಾರತೀಯ ಸಂಸ್ಕೃತಿಯನ್ನು ಮಹಾಕಾವ್ಯ ರೂಪದಲ್ಲಿ ಅನಾವರಣಗೊಳಿಸುತ್ತದೆ.
ಚಿಕ್ಕಮಗಳೂರಿನ ಹಿರೇಕೊಡಿಗೆಯಲ್ಲಿ ಎಂಬಲ್ಲಿ ಡಿಸೆಂಬರ್ 29, 1904 ರಲ್ಲಿ ಜನಿಸಿದರು. ತಂದೆ ವೆಂಕಟಪ್ಪ; ತಾಯಿ ಸೀತಮ್ಮ. ಇವರ ನಿಜವಾದ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ. (Kuvempu) ಅವರ ಬಾಲ್ಯ ತಮ್ಮ ತಂದೆಯ ಊರಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಕಳೆಯಿತು.
“ಕುವೆಂಪು ಅವರ ತಮ್ಮ ಬಾಲ್ಯವನ್ನು ಗ್ರಾಮೀಣ ವಾತಾವರಣದಲ್ಲಿ ಕಳೆದರು, ಕೂಲಿಮಠದಲ್ಲಿ ತಮ್ಮ ಅಕ್ಷರ ಜ್ಞಾನವನ್ನು ಆರಂಭಿಸಿದರು. ನಂತರ ತೀರ್ಥಹಳ್ಳಿ ಮತ್ತು ಮೈಸೂರಿನ ವೆಸ್ಲಿಯನ್ ಮಿಷನ್ ಹೈಸ್ಕೂಲಿನಲ್ಲಿ ತಮ್ಮ ಶಿಕ್ಷಣವನ್ನು (Education) ಮುಂದುವರಿಸಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಮತ್ತು ಕನ್ನಡದಲ್ಲಿ ಎಂ.ಎ. ಪದವಿ ಪಡೆದು, ಪ್ರಸಿದ್ಧ ವಿದ್ವಾಂಸ ಟಿ.ಎಸ್. ವೆಂಕಣ್ಣಯ್ಯನವರ ಮಾರ್ಗದರ್ಶನ ಪಡೆದರು.
ಕುವೆಂಪು ಅವರು 1929 ರಲ್ಲಿ ಮೈಸೂರಿನ (Mysore) ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಇವರು, ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.
ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸವನ್ನು ಆರಂಭಿಸಿದ ಕುವೆಂಪು, ನಂತರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದರು. ಕೊನೆಗೆ ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಅಭಿವೃದ್ಧಿ ಹೊಂದಿದರು. ತಮ್ಮ ಕಲ್ಪನೆಯ ಕೂಸಾದ ಮಾನಸ ಗಂಗೋತ್ರಿಯನ್ನು ಸ್ಥಾಪಿಸಿ, ವಿಶ್ವವಿದ್ಯಾಲಯವನ್ನು ಅಧ್ಯಯನ, ಸಂಶೋಧನೆ ಮತ್ತು ಪ್ರಸಾರ ಕೇಂದ್ರವನ್ನಾಗಿ ಮಾಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ. ಕನ್ನಡ ಭಾಷೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ, ಅವರು ಕಡಿಮೆ ಅವಧಿಯಲ್ಲಿಯೇ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ರಚಿಸಿ, ಕನ್ನಡ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ನೀಡಿದರು.”
ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಪೂರ್ಣಚಂದ್ರ ತೇಜಸ್ವಿ, (Poornachandra Tejaswi) ಕೋಕಿಲೋದಯ ಚೈತ್ರ, ಇಂದುಕಲಾ ಮತ್ತು ತಾರಿಣಿ ಎಂಬ ನಾಲ್ವರು ಮಕ್ಕಳಿದ್ದರು. ತಂದೆಯಾದ ಕುವೆಂಪು ಅವರಂತೆ, ಪೂರ್ಣಚಂದ್ರ ತೇಜಸ್ವಿಯವರು ಕೂಡ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದರು. ಮಗಳು ಕೋಕಿಲೋದಯ ಚೈತ್ರ ಆಸ್ಟ್ರೇಲಿಯಾದಲ್ಲಿ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡಿದ್ದಾರೆ.
ಕುವೆಂಪು ಅವರು ಕನ್ನಡ ಕಂಪನ್ನು ಕತೆ, ಕಾದಂಬರಿ, ಕೃತಿ, ನಾಟಕಗಳ ಮೂಲಕ ಸಾರಿದ್ದಾರೆ.
ಕಾವ್ಯಗಳು – ಕೊಳಲು, ಪಾಂಚಜನ್ಯ ,ನವಿಲು ,ಕಲಾಸುಂದರಿ,ಕಥನ ಕವನಗಳು ,ಪ್ರೇಮ ಕಾಶ್ಮೀರ
ಜೀವನ ಚರಿತ್ರೆ- ಸ್ವಾಮಿ ವಿವೇಕಾನಂದ, ಶ್ರೀ ರಾಮಕೃಷ್ಣ ಪರಮಹಂಸ
ಕಾದಂಬರಿಗಳು – ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು
ಆತ್ಮ ಚರಿತ್ರೆಯಾದ ನೆನಪಿನ ದೋಣಿಯಲಿ ಹೀಗೆ ಹಲವಾರು ಪ್ರಬಂಧ, ಕಥೆಗಳು, ಸಾಹಿತ್ಯ ವಿಮರ್ಶೆ, ಮಕ್ಕಳ ಕಥೆಗಳು, ಕವನಗಳು ರಚಿಸಿದ್ದಾರೆ.
ಈ ಮಹಾನ್ ವ್ಯಕ್ತಿಯ 113 ನೇ ಹುಟ್ಟುಹಬ್ಬದ ಪ್ರಯುಕ್ತ ಗೂಗಲ್, ಕವಿ ಕುವೆಂಪು ಅವರು ದೊಡ್ಡ ಕಲ್ಲಿನ ಮೇಲೆ ಕುಳಿತು ಸಾಹಿತ್ಯ ಬರೆಯುತ್ತಿದ್ದಾರೆ ಎಂದು ತನ್ನ ಡೂಡಲ್ ಮೂಲಕ ನೆನಪಿಸಿಕೊಂಡಿದೆ. ಇವರ ಸಾಹಿತ್ಯ ಸಾಧನೆಗೆ ಜ್ಞಾನಪೀಠ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರತ್ನ, ಪಂಪ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಅವರನ್ನ ಅರಸಿ ಬಂದವು. ಇವರ ಬರಹದ ಜೊತೆಗೆ ಬದುಕಿರುವ ರೀತಿ ಆ ಪಯಣ ಪ್ರತಿಯೊಬ್ಬರಿಗೂ ಆದರ್ಶ. ಕುವೆಂಪು ಅವರು ಕನ್ನಡ ಸಾಹಿತ್ಯದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅವರ ಕೃತಿಗಳು ಅನೇಕ ಜನರನ್ನು ಪ್ರೇರಣೆಗೊಳಿಸಿವೆ, ಮತ್ತು ಕನ್ನಡ ಸಾಹಿತ್ಯದ ಸಂಪತ್ತನ್ನು ಹೆಚ್ಚಿಸಿವೆ. ಕುವೆಂಪು ಅವರ ಸಾಹಿತ್ಯವು ಕನ್ನಡ ಸಾಹಿತ್ಯದ ಅಮೂಲ್ಯವಾದ ನಿಧಿಯಾಗಿದೆ.
ಕುವೆಂಪು ಅವರ ಕೃತಿಗಳು ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತವೆ. ಮತ್ತು ಅದರ ಮೌಲ್ಯಗಳನ್ನು ಹೇಳುತ್ತವೆ. ಕುವೆಂಪು ಅವರು ಕನ್ನಡ ಭಾಷೆಯನ್ನು ಅತ್ಯಂತ ಸುಂದರವಾಗಿ ಬಳಸಿದ್ದಾರೆ. ಅವರ ಕವಿತೆಗಳು ಮತ್ತು ನಾಟಕಗಳು ಕನ್ನಡ ಭಾಷೆಯ ಸೌಂದರ್ಯವನ್ನು ಪ್ರದರ್ಶಿಸುತ್ತವೆ.
ಕುವೆಂಪು ಅವರು ನವೆಂಬರ್ 11, 1994ರಂದು ಮೈಸೂರಿನಲ್ಲಿ ನಿಧನರಾದರು. ತಮ್ಮ ಹುಟ್ಟೂರಾದ ಕುಪ್ಪಳಿಯಲ್ಲಿಯೇ ಅವರ ಅಂತ್ಯಸಂಸ್ಕಾರವನ್ನು ಮಾಡಲಾಯಿತು. ಕುಪ್ಪಳಿಯಲ್ಲಿರುವ ಅವರ ಸಮಾಧಿ ಒಂದು ಸ್ಮಾರಕವಾಗಿದೆ.